ಝೀನೋ (ಈಲಿಯದವ)
	ವಾದನುಪುಣ, ಹುಟ್ಟಿದ್ದು ಕ್ರಿ.ಪೂ. 490ರ ಸುಮಾರಿನಲ್ಲಿ. ಈತ ಪಾರ್ಮೆನಿಡೀಸನ ಶಿಷ್ಯ. ತನ್ನ ಗುರುವಿನ ತತ್ತ್ವಕ್ಕೆ ಪೀತ್ಯಗರೀಯನರು ಕೊಟ್ಟ ಪೆಟ್ಟಿಗೆ ಪ್ರತಿಯಾಗಿ ಇನ್ನೂ ಬಲವಾದ ಪೆಟ್ಟು ಕೊಟ್ಟು ಅವರನ್ನು ಪರಿಹಾಸ ಮಾಡಿ ತನ್ನ ಗುರುವಿನ ತತ್ತ್ವವನ್ನು ಸಂರಕ್ಷಿಸುವುದು ಇವನ ವಾದದ ಉದ್ದೇಶ.  ಬದಲಾಯಿಸದೆ ಎಂದೆಂದಿಗೂ ಒಂದೇ ಆಗಿರುವುದೇ ನಿಜವಾದ ಸತ್ ಎಂಬುದು ಪಾರ್ಮೆನಿಡೀಸನ ಸಿದ್ಧಾಂತ.  ಸತ್ ಒಂದೇ ಅಲ್ಲ, ಅದು ಅನೇಕ ಮತ್ತು ಬದಲಾವಣೆಯುಳ್ಳದ್ದು ಎಂಬುದು ಪಿತ್ಯಾಗರಸ್ ಮತ್ತು ಅವನ ಅನುಯಾಯಿಗಳ ಪ್ರತಿಪಕ್ಷ.

	ಜಿóೀನೋವಿನ ವಾದಕ್ರಮವನ್ನು ರಿಡಕ್ಷಿಯೇ ಆಡ್ ಅಬ್ಸರ್ಡಮ್ ಎಂದು ಕರೆಯಬಹುದು. ಅಬ್ಸರ್ಡಮ್ ಎಂದರೆ 

ಅಸಂಬದ್ಧ ; ರೆಡ್ಯುಸ್ ಎಂದರೆ ಇಳಿಸಬಹುದು, ಪಿತ್ಯಗರೀಯನರ ವಾದವನ್ನು ಅಸಂಬದ್ಧ ಪರಿಸ್ಥಿತಿಗೆ ಇಳಿಸುವಲ್ಲಿ ಈತ ಅನೇಕ ಒಗಟೆಗಳನ್ನು (ಪ್ಯಾರಡಾಕ್ಸಸ್) ಸೃಷ್ಟಿಸಿದ್ದಾನೆ.

	ಮೊದಲು ಪ್ರತಿಕಕ್ಷಿಯ ಅಂದರೆ ಆಧಾರಭಾವನೆಗಳನ್ನು ಒಪ್ಪಿ ಅನಂತರ ಆ ಮೂಲ ಭಾವನೆಗಳಿಂದ ನೇರವಾಗಿ ಅನುಮಿತವಾದವು ಪರಸ್ಪರ ವಿರುದ್ಧವಾದುವೆಂದೂ ಅಂಥ ಆಭಾಸಕರ ಅನುಮಿತಗಳಿಗೆ ಮೂಲ ಪ್ರತಿಜ್ಞೆಗಳೇ ಕಾರಣವಾದ್ದರಿಂದ ಆ ಮೂಲ ಪ್ರತಿಜ್ಞೆಗಳು ಅಸಾಧು ಎಂದೂ ತೋರಿಸುವುದು ಇಲ್ಲಿನ ವಾದದ ಕ್ರಮ.
ಚಲಿಸುವ ಬಾಣ ನಿಶ್ಚಲವಾಗಿದೆ. ಅತ್ಯಂತ ವೇಗವಾಗಿ ಓಡುವವನೆಂದು ಪ್ರಸಿದ್ಧವಾದ ಅಕಿಲೀಸ್ ಪಂದ್ಯದಲ್ಲಿ ಆಮೆಯನ್ನು ಹಿಂದೆ ಹಾಕಲಾರ. ಇವು ಜಿûೀನೋವಿನ ಹಲವು ಒಗಟೆಗಳಲ್ಲಿ ಎರಡು.
ದೇಶ ಕಾಲ ಅನಂತ ಬಿಂದುಗಳಿಂದ, ಕಣಗಳಿಂದ ಕೂಡಿದವು ಎಂದು ಭಾವಿಸಿದರೆ ಬಾಣವೊಂದು ಬಿಟ್ಟ ಸ್ಥಳದಿಂದ ಅದು ಮುಟ್ಟುವ ಗುರಿಯ ಸ್ಥಳದವರೆಗಿನ ಅಂತರ ಅನಂತ ಬಿಂದುಗಳಿಂದ ಕೂಡಿರಬೇಕು ಮತ್ತು ಬಾಣ ಬಿಟ್ಟ ಕಾಲದಿಂದ ಗುರಿ ಮುಟ್ಟಿದ ಕಾಲದ ವರೆಗಿನ ಅವಧಿ ಅನಂತ ಕ್ಷಣಗಳಿಂದ ಕೂಡಿರಬೇಕು. ಬಿಟ್ಟ ಬಾಣ ಒಂದೊಂದು ಬಿಂದುವನ್ನೂ ಮುಟ್ಟಬೇಕು. ಹಾಗೆ ಮುಟ್ಟಿದ್ದು ಅಲ್ಲಿ ಅತ್ಯಂತ ಅಲ್ಪವಾದ ಕ್ಷಣವಾದರೂ ತಂಗಬೇಕು.  ಹೀಗೆ ಬಾಣ ಬಿಟ್ಟ ಸ್ಥಳದಿಂದ ಅದು ಮುಟ್ಟುವ ಸ್ಥಳದವರೆಗೆ, ಬಿಟ್ಟ ಕಾಲದಿಂದ ಮುಟ್ಟುವ ಕಾಲದವರೆಗೆ ಅನಂತ ಬಿಂದುಗಳೂ ಅನಂತ ಕ್ಷಣಗಳೂ ಇರುವುದರಿಂದ, ಆ ಬಾಣ ಒಂದೊಂದು ಬಿಂದುವಿನಲ್ಲೂ ಒಂದು ಕ್ಷಣ ಇರಬೇಕಾದ್ದರಿಂದ ಅದು ಅನಂತವಾಗಿ ಚಲಿಸದೆ ನಿಂತಿರಬೇಕಾಗುತ್ತದೆ. 

	ಇದೇ ವಾದ ಅಕಿಲೀಸ್ ಮತ್ತು ಆಮೆಯ ಪಂದ್ಯಕ್ಕೂ ಅನ್ವಯಿಸುತ್ತದೆ. ಅಕಿಲೀಸ್ ಒಲಂಪಿಯ ಪಂದ್ಯಗಳಲ್ಲಿ ಅತಿವೇಗವಾಗಿ ಓಡುವನೆಂದು ಪ್ರಸಿದ್ಧನಾದ್ದರಿಂದ, ಆಮೆ ಎಲ್ಲಕ್ಕಿಂತಲು ನಿಧಾನವಾಗಿ ಚಲಿಸುವ ಪ್ರಾಣಿಯೆಂದು ಪ್ರಸಿದ್ಧವಾದ್ದರಿಂದ ಪಂದ್ಯ ನಡೆಸುವವರು, ಪಂದ್ಯದ ನೀತಿಗನುಸಾರವಾಗಿ ಆಮೆಯನ್ನು ಅಕಿಲೀಸಿಗಿಂತ ಒಂದು ಮೈಲಿ ಮುಂದೆ ನಿಲ್ಲಿಸಿ ಅವರಿಬ್ಬರನ್ನೂ ಒಂದು ಕಾಲದಲ್ಲಿ ಓಡಲು ಬಿಡುತ್ತಾರೆ. ಗಂಟೆಗೆ ಹತ್ತು ಮೈಲಿ ಓಡುವ ಅಕಿಲೀಸ್ ಒಂದು ಮೈಲಿಯನ್ನು ಮುಟ್ಟಲು 1/10 ಗಂಟೆ ಬೇಕಾಗುತ್ತದೆ. ಆ 1/10 ಗಂಟೆಯ ಹೊತ್ತಿಗೆ, ಗಂಟೆಗೆ ಒಂದು ಮೈಲಿ ಓಡುವ ಆಮೆ 1/10 ಮೈಲಿ ಮುಂದೆ ಹೋಗಿರುತ್ತದೆ. ಆ 1/10 ಮೈಲಿಯನ್ನು ಮುಟ್ಟಲು ಅಕಿಲೀಸಿಗೆ 1/100 ಗಂಟೆ ಹಿಡಿಯುತ್ತದೆ,. ಆ 1/100 ಗಂಟೆಯಲ್ಲಿ ಆಮೆ 1/100 ಮೈಲಿ ಮುಂದೆ ಹೋಗಿರುತ್ತದೆ. ಕಾಲದೇಶಗಳು ಅನಂತವಾಗಿ ವಿಭಜ್ಯವಾದ್ದರಿಂದ ಅವೆರಡರ ಮಧ್ಯೆ 1/1000, 1/10000, 1/100000, 1/1000000 ಅಂತರವಿದ್ದೇ ಇದ್ದು, ಅಕಿಲೀಸ್ ಆಮೆಯನ್ನು ಹಿಂದೆ ಹಾಕಲಾಗುವುದೇ ಇಲ್ಲ. ಇಲ್ಲಿ ಮುಖ್ಯವಾಗಿ ಗಮನಿಸಬೇಕಾದದ್ದು ದೇಶಕಾಲಗಳು ಅನಂತವಾಗಿ ವಿಭಾಜ್ಯವೆಂಬುದನ್ನು ಆಧಾರ ಪ್ರತಿಜ್ಞೆಯಾಗಿ ಇಟ್ಟುಕೊಂಡು ವಾದಿಸಿದರೆ, ಇಂಥ ಅಸಂಗತವಾದ ಅನುಮತಿಗಳು ಏರ್ಪಡುತ್ತವೆ. ಎಂಬುದು. ವಾಸ್ತವವಾಗಿ ಅಕಿಲೀಸ್ ಆಮೆಯನ್ನು ಹಿಂದೆ ಹಾಕಲಾರ ಎಂಬುದು ಜಿóೀನೋವಿನ ಅಭಿಮತವಲ್ಲ. ಕಾಲದೇಶಗಳ ವಿಚಾರವಾಗಿ ಬೇರೆ ಆಧಾರ ಭಾವನೆಗಳುಳ್ಳವರು ಚಲನೆಯ ಸಾಧ್ಯತೆಯನ್ನು ಸ್ಥಾಪಿಸಬಹುದು. ಉದಾಹರಣೆಗೆ ಬರ್ಗ್‍ಸನ್ ಕಾಲ ಸತ್ತಿನ ಜೀವಾಳವೆಂದು ಬೇರೆ ರೀತಿಯಲ್ಲಿ ಸ್ಥಾಪಿಸಿರುತ್ತಾನೆ. ಪಿತ್ಯಗರೀಯನರ ದೇಶಕಾಲಗಳ ಭಾವನೆಯನ್ನು ಆಧಾರವಾಗಿ ಇಟ್ಟುಕೊಂಡು ವಾದಿಸಿದರೆ ಇಂಥ ಅಸಾಂಗತ್ಯಗಳು ಹುಟ್ಟುತ್ತವೆ ಎಂಬುದನ್ನು ತೋರಿಸುವುದೇ ಜಿóೀನೋವಿನ ಉದ್ದೇಶ.

(ನೋಡಿ- ಜಿóೀನೋನ-ವಿರೋಧಾಭಾಸಗಳು)
(ಜಿ.ಎಸ್.)
	
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ